ನೀಷಪುರ್ 
	ಈಶಾನ್ಯ ಇರಾನಿನ ಖೊರಸಾನ್ ಪ್ರಾಂತ್ಯದಲ್ಲಿರುವ ಒಂದು ಐತಿಹಾಸಿಕ ಪಟ್ಟಣ. ಸಮುದ್ರಮಟ್ಟದಿಂದ 1,123 ಮೀ. ಎತ್ತರದಲ್ಲಿದೆ. ವಿಶಾಲವಾದ ಫಲವತ್ತಾದ ಬಯಲಿನಲ್ಲಿ, ಕೂಹೀ ಬೀನಾಲೂದ್ ಶಿಖರದ ದಕ್ಷಿಣ ತಪ್ಪಲಲ್ಲಿದೆ. ಗೋದಿ ಮತ್ತು ಹತ್ತಿ ಈ ಪ್ರದೇಶದ ಮುಖ್ಯ ಬೆಳೆಗಳು. ಹತ್ತಿ ಬೀಜದ ಎಣ್ಣೆಯ ಉತ್ಪಾದನೆ, ಚರ್ಮಗಳನ್ನು ಹದಮಾಡುವುದು, ಸಾಬೂನು, ಜಮಖಾನೆ ಮತ್ತು ರಗ್ಗುಗಳ ತಯಾರಿಕೆ, ಕುಂಬಾರಿಕೆ ಇವು ಮುಖ್ಯ ಕಸುಬುಗಳು.

	ಈ ಪಟ್ಟಣವನ್ನು ಸ್ಥಾಪಿಸಿದನೆನ್ನಲಾದ ಸಾಸನಿಡ್ ಷಾಪೂರ್ (ಆಳ್ವಿಕೆ 241-272) ದೊರೆಯ ಹೆಸರಿನಿಂದ ಈ ಪಟ್ಟಣಕ್ಕೆ ಈ ಹೆಸರು ಬಂದಿದೆ. 5ನೆಯ ಶತಮಾನದಲ್ಲಿ ಇದು ರಾಜಧಾನಿಯಾಘಿ ಮಹತ್ತ್ವ ಪಡೆದಿತ್ತು.; ಆದರೆ 7ನೆಯ ಶತಮಾನದ ವೇಳೆಗೆ ಇದರ ಪ್ರಾಮುಖ್ಯ ಕಳೆದುಹೋಯಿತು. ತಾಹಿರಿದ್ ರಾಜವಂಶದ ಕಾಲದಲ್ಲಿ (821-873) ಇದು ಮತ್ತೆ ಪ್ರವರ್ಧಮಾನವಾಯಿತು. 10ನೆಯ ಶತಮಾನದ ಸಾಮಾನಿದ್ ವಂಶದ ಆಳ್ವಿಕೆಯ ಕಾಲದಲ್ಲಿ (874-999) ವೈಭವದ ಪರಾಕಾಷ್ಠೆ ಮುಟ್ಟಿತು. ಪರ್ಷಿಯನ್ ಭಾಷೆ ಹಾಗೂ ಸಂಸ್ಸøತಿಯ ಪುನರುಜ್ಜೀವನ ಕಾರ್ಯದಲ್ಲಿ ಇದು ಪಾತ್ರ ವಹಿಸಿತು. ಆಗ ಈ ಪಟ್ಟಣ ವಾಣಿಜ್ಯ ಹಾಗೂ ಸಾಂಸ್ಕøತಿಕ ಕೇಂದ್ರವಾಗಿತ್ತು. 10ನೇ ಶತಮಾನದ ಅರಬ್ ಭೂಗೋಳಶಾಸ್ತ್ರಜ್ಞ  ಅಲ್-ಇಷ್ತಾಖ್ರಿ ಇದನ್ನು ವರ್ಣಿಸಿದ್ದಾನೆ; ಪಟ್ಟಣದ ಸುತ್ತಲೂ ಜನನಿಬಿಡವಾದ ಬಡಾವಣೆಗಳಿದ್ದವು. ಇಲ್ಲಿ ಸುಭದ್ರ ಕೋಟೆಯೂ 42 ಕಾಪು ಠಾಣ್ಯಗಳೂ ಇದ್ದುವು. ಇಲ್ಲಿಯ 50 ಪ್ರಮುಖ ಬೀದಿಗಳಲ್ಲಿ ಹೆಚ್ಚು ಕಡಿಮೆ ಇಡೀ ಏಷ್ಯದ ಎಲ್ಲೆಡೆಗಳಿಂದ ಬಂದ ವಿದೇಶೀ ಸರಕುಗಳನ್ನು ಮಾರಾಟಕ್ಕೆ ಇಡಲಾಗಿತ್ತು.

	ಸೆಲ್ಜೂಕ್ ಮನೆತನದ ಮೊದಲ ದೊರೆ ತೊಗ್ರಿಲ್ ಬೇಗ್ 1037ರಲ್ಲಿ ನೀಷಪುರನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ. 12ನೆಯ ಶತಮಾನದಲ್ಲಿ ಸೆಲ್ಜೂಕರ ಆಳ್ವಿಕೆಯ ಕಾಲದಲ್ಲಿ ನೀಷಪುರದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಿಬ್ಬರು-ಪರ್ಷಿಯದ ಆಧ್ಯಾತ್ಮಿಕ ಮಹಾಕವಿಗಳಲ್ಲಿ ಒಬ್ಬನಾದ ಫರೀದ್ ಉದ್-ದೀನ್ ಅತ್ತಾರ್  ಹಾಗೂ ಸುಪ್ರಸಿದ್ಧ ರುಬಯ್ಯಾತ್ ಕಾವ್ಯದ ಕರ್ತೃ ಉಮರ್ ಖಯಾಮ್, ಜೀವಿಸಿದ್ದರು. ಇವರಿಬ್ಬರ ಸಮಾಧಿಗಳು ಆಧುನಿಕ ನೀಷಪುರದ ಆಗ್ನೇಯ ಭಾಗದಲ್ಲಿವೆ. 

	12ನೆಯ ಶತಮಾನದಲ್ಲಿ ಈ ನಗರದ ಅವನತಿ ಆರಂಭವಾಯಿತು. 1143ರಲ್ಲಿ ತುರ್ಕಿಸ್ತಾನದ ಘುಜ್ ಬುಡಕಟ್ಟಿನ ಜನರೂ 1221ರಲ್ಲಿ ಮುಂಗೋಲರೂ ಈ ನಗರವನ್ನು ಕೊಳ್ಳೆ ಹೊಡೆದರು. ಈ ನಗರ 13ನೆಯ ಶತಮಾನದಲ್ಲಿ ಎರಡು ಬಾರಿ ಭೂಕಂಪಕ್ಕೆ ಈಡಾಯಿತು. ಪ್ರತಿ ಬಾರಿಯೂ ಹೊಸ ಪ್ರದೇಶದಲ್ಲಿ ನಗರವನ್ನು ಪುನರ್ನಿರ್ಮಿಸಲಾಯಿತು. 14ನೆಯ ಶತಮಾನದ ವೇಳೆಗೆ ಈ ನಗರ ಚೇತರಿಸಿಕೊಂಡಿತಾದರೂ ತನ್ನ ಪ್ರಾಚೀನ ಮಹತ್ತ್ವವನ್ನು ಮರಳಿ ಗಳಿಸಿಕೊಳ್ಳಲು ಇದಕ್ಕೆ ಸಾಧ್ಯವಾಗಲೇ ಇಲ್ಲ.

	1643ರಲ್ಲಿ ನಿರ್ಮಿತವಾದ, ಸುಂದರ ಗುಮ್ಮಟದಿಂದ ಕೂಡಿದ ಸಮಾಧಿ ಭವನ ಈ ಪಟ್ಟಣದ ಸಮೀಪದಲ್ಲಿ ಇದೆ. ಇಲ್ಲಿ ಮಧ್ಯಯುಗದ ಮತ್ತು ಅದಕ್ಕೂ ಹಿಂದಿನ ಕಾಲದ ಅಮೂಲ್ಯ ಅವಶೇಷಗಳಿವೆ. ನೀಷಪುರದಿಂದ ಟೇಹ್ರಾನ್ ಮತ್ತು ಮೆಷೆದ್ ನಗರಗಳಿಗೆ ರಸ್ತೆ ಹಾಗೂ ರೈಲು ಸಂಪರ್ಕವುಂಟು. ನೀಷಪುರದ ಜನಸಂಖ್ಯೆ 40,000 (1972 ಅಂ.)
(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ